ಪ್ಯಾಸ್ಟರ್‍ನಾಕ್, ಬೋರಿಸ್ ಲಿಯೊನಿಡೋವಿಚ್ 
	1890-1960 ರಷ್ಯದ ಕವಿ ಮತ್ತು ಕಾದಂಬರಿಕಾರ. ತಂದೆ ಕಲೆಗಾರ, ತಾಯಿ ಪಿಯಾನೊ ವಾದಕಿ. ಸಂಗೀತ ಮತ್ತು ತತ್ತ್ವಶಾಸ್ತ್ರಗಳನ್ನು ಅಭ್ಯಾಸ ಮಾಡಿ ಹದಿನಾರನೆಯ ವಯಸ್ಸಿನಲ್ಲಿ ಸಾಹಿತ್ಯ ರಚನೆ ಪ್ರಾರಂಭಿಸಿದ. ಯಶಸ್ಸು ಮಾತ್ರ ನಿಧಾನವಾಗಿ ಬಂತು. ಮೊದಲ ಮಹಾಯುದ್ಧದ ಕಾಲದಲ್ಲಿ ಕಾರ್ಖಾನೆಯ ಕೆಲಸಗಾರನಾಗಿ, ಅನಂತರ ಪುಸ್ತಕ ಭಂಡಾರದ ಅಧಿಕಾರಿಯಾಗಿ ಇದ್ದ. ಮೈ ಸಿಸ್ಟರ್ಸ್ ಲೈಫ್ 1917ರಲ್ಲಿ ರಚಿತವಾದರೂ 1922ರ ತನಕ ಪ್ರಕಟವಾಗಲಿಲ್ಲ. ಭಾವಗೀತೆಗಳ ಈ ಸಂಕಲನ ಮೊತ್ತ ಮೊದಲಿಗೆ ಕೀರ್ತಿ ತಂದಿತು. ಹಲವು ಪಂಥಗಳ ಕವಿಗಳು ಇದರಿಂದ ಪ್ರಭಾವಿತರಾದರು. ಪ್ರಾರಂಭದಲ್ಲಿ ಈತ ಸಂಕೇತ ವಿಧಾನ ಅನಂತರ ಸ್ವೇಚ್ಛಾ ಸಂಕೇತ ವಿಧಾನಗಳಲ್ಲಿ ಪ್ರಯೋಗಗಳನ್ನು ಮಾಡಿ ತನ್ನ ಭಾವನೆಗಳನ್ನು ಸುಲಭವಾದ ಭಾಷೆಯಲ್ಲಿ ವಿಶಿಷ್ಟವಾದ ಪದಜೋಡಣೆ ಮತ್ತು ಲಯಗಳಿಂದ ನಿರೂಪಿಸುವ ಮಾರ್ಗವನ್ನು ಪರಿಪೂರ್ಣಗೊಳಿಸಿಕೊಂಡ. ಸಾಮಾನ್ಯ ಓದುಗರಿಗಿಂತ ಕವಿಗಳಿಗೆ ಹೆಚ್ಚು ಪರಿಚಿತನಾಗಿರುವುದು, ಇತರ ಕವಿಗಳ ಮೇಲೆ ಗಮನಾರ್ಹವಾದ ಪ್ರಭಾವವನ್ನು ಬೀರಿರುವುದು, ಆಳವಾದ ಭಾವನೆಯೊಂದಿಗೆ ಜಾಣ್ಮೆಯನ್ನು ಬೆರೆಸುವುದು, ಕಾವ್ಯ ಜಗತ್ತಿನಲ್ಲಿ ಸುಪರಿಚಿತವಾದ ಪ್ರತಿಮೆಗಳನ್ನು ಬಿಟ್ಟು ಜನಸಾಮಾನ್ಯರ ಜೀವನದಿಂದ ಪ್ರತಿಮೆಗಳನ್ನು ಆರಿಸಿಕೊಳ್ಳುವುದು, ಸುಲಭಸಾಧ್ಯವಾದ ಮಾಧುರ್ಯವನ್ನು ದೂರವಿಡುವುದು - ಈ ಎಲ್ಲ ರೀತಿಗಳಲ್ಲಿ ಪ್ಯಾಸ್ಟರ್‍ನಾಕನನ್ನು ಇಂಗ್ಲಿಷ್ ಕವಿ ಡನ್‍ನೊಂದಿಗೆ ಹೋಲಿಸುತ್ತಾರೆ. ಕವಿಯಾಗಿ ಪ್ಯಾಸ್ಟರ್‍ನಾಕ್ ಜ್ಞಾನದ ಸ್ವರೂಪವನ್ನು ಅರಿಯಲು ಯತ್ನಿಸಿದ. ಪ್ರತಿಭೆ, ಸಹಭಾವ, ಪ್ರತಿಮೆ ಇವು ಇವನ ಸಾಧನಗಳು.

	ಪ್ಯಾಸ್ಟರ್‍ನಾಕನ ಸುಪ್ರಸಿದ್ಧ ಕಾದಂಬರಿ ಡಾ. ಷಿವಾಗೊ ಇಪ್ಪತ್ತು ವರ್ಷಗಳ ಪರಿಶ್ರಮದ ಫಲ. ಹೊಸ ಜಗತ್ತು ಎನ್ನುವ ರಷ್ಯನ್ ಪತ್ರಿಕೆಯ ಸಂಪಾದಕ ಈ ಕಾದಂಬರಿಯನ್ನು ಪ್ರಕಟಿಸಲು ನಿರಾಕರಿಸಿದ (1956) ಅನಂತರ 1957ರಲ್ಲಿ ಇದರ ಇಟಾಲಿಯನ್ ಭಾಷಾಂತರ ಪ್ರಕಟವಾಯಿತು. ಈ ಕೃತಿಗೆ 1958ರಲ್ಲಿ ನೊಬೆಲ್ ಬಹುಮಾನ ದೊರೆತುದರಿಂದ ರಷ್ಯದ ಸರ್ಕಾರದ ಆಗ್ರಹಕ್ಕೆ ತುತ್ತಾದ ಪ್ಯಾಸ್ಟರ್‍ನಾಕ್ ಬಹುಮಾನವನ್ನು ಸ್ವೀಕರಿಸಲಿಲ್ಲ.

	ಡಾ. ಷಿವಾಗೊ ಕಾವ್ಯಮಯ ಕಾದಂಬರಿ. ಭಾಷೆಯೂ ಕಾವ್ಯಮಯ ಗದ್ಯವೇ. ನಾಯಕ ಷಿವಾಗೊನ ಜೀವನದ ವೈಫಲ್ಯ ಕಾದಂಬರಿಯ ವಸ್ತು. ಕಾರ್ಯವಿಮುಖನಾಗಿ, ಸಾರ್ವಜನಿಕ ಜೀವನದಿಂದ ದೂರ ಉಳಿಯಲು ಯತ್ನಿಸುವ ಷಿವಾಗೊ ಪ್ರತಿಯೊಂದು ಸಂಧಿಗ್ಧವಾದ ಅಥವಾ ಕಠಿಣವಾದ ಸನ್ನಿವೇಶದಲ್ಲಿ ತಾನು ಸ್ವತಂತ್ರವಾಗಿ ಯೋಚಿಸಿ ಕಾರ್ಯಪ್ರವರ್ತನಾಗಲು ಹಿಂದೆಗೆಯುತ್ತಾನೆ. ಇದರಿಂದ ಅಧಿಕಾರ ವ್ಯಾಮೋಹವಿರುವ ಇತರರೇ ಅವನ ಜೀವನವನ್ನು ರೂಪಿಸುತ್ತಾರೆ. ಅವನ ಜೀವನ ನಿಷ್ಕ್ರಿಯಾವಂತ ನಿಷ್ಪ್ರಯೋಜಕ ಎಂದಾದರೂ ಅವನ ಕಲಾಸೃಷ್ಟಿ ಜನತೆಗೆ ಇವನ ಕೊಡುಗೆಯಾಗಿ ನಿಲ್ಲುತ್ತದೆ. ಈ ಕಾದಂಬರಿಯಲ್ಲಿ ಪ್ಯಾಸ್ಟರ್‍ನಾಕ್ ತನ್ನಂತೆ ಸಾಮಾಜಿಕ ಜೀವನದಿಂದ ದೂರ ನಿಂತವರು ಎನ್ನಿಸಿಕೊಂಡವರು ತಕ್ಷಣ ಪ್ರಯೋಜನಕ್ಕೆ ಬರುವ ಕಾರ್ಯವನ್ನು ಮಾಡದಿದ್ದರೂ ಅವರ ಜೀವನದಲ್ಲಿಯೂ ಸಾರ್ಥಕತೆ ಉಂಟು ಎನ್ನುವುದನ್ನು ನಿರೂಪಿಸುತ್ತಿದ್ದಾನೆ. ಡಾ. ಷಿವಾಗೊ ಕಾದಂಬರಿಯಲ್ಲಿ ಒಂದು ಪಾತ್ರ-ಒಂದೆಡೆ ಹೀಗೆನ್ನುತ್ತಾನೆ. ಮಾನವ ಹುಟ್ಟಿರುವುದು ಜೀವಿಸುವುದಕ್ಕಾಗಿಯೊ ಹೊರತು ಜೀವಿಸಲು ಅಗತ್ಯವಾದ ಸಿದ್ಧತೆ ಮಾಡುತ್ತಲೇ ಇರುವುದಕ್ಕೆಲ್ಲ ಇದು ಕಾದಂಬರಿಕಾರನ ಭಾವನೆಯೂ ಹೌದು. ಮಾನವರನ್ನು ಮೀರಿದ ಶಕ್ತಿಯೊಂದು ಎಲ್ಲರನ್ನೂ ಸಲಹುತ್ತದೆ ಎನ್ನುವ ದೃಢ ನಂಬಿಕೆಯೂ ಸಾಂಕೇತಿಕವಾಗಿ ಸೂಚಿತವಾಗಿದೆ. ಷಿವಾಗೋನ ಕವನಗಳು ಅವನ ಜೀವನ ದರ್ಶನದ ಅಭಿವ್ಯಕ್ತಿ. ಬಾಳು ಮತ್ತೆ ಮತ್ತೆ ಚೇತನ ಪಡೆದು ಅರಳುತ್ತದೆ ಎನ್ನುವುದು ಈ ದರ್ಶನದ ತಿರುಳು. ಈ ಕಾದಂಬರಿಯಲ್ಲಿ ರಷ್ಯದ ಪ್ರಕೃತಿ ನಿರೂಪಣೆಯಲ್ಲಿ ಪದಗಳ ಬಳಕೆ ಶೋಧಕವಾಗಿದೆ. 

	ಈ ಕಾದಂಬರಿ ಇಪ್ಪತ್ತನೆಯ ಶತಮಾನದ ಪ್ರಾರಂಭದಿಂದ 1940 ರ ವರೆಗಿನ ರಷ್ಯದ ಸಾಮಾಜಿಕ ಜೀವನದ ದೃಶ್ಯಗಳ ಮಾಲೆ ಎನ್ನಬಹುದು. ಕ್ರಾಂತಿಯ ಮೊದಲಿನ ರಷ್ಯ, ಕ್ರಾಂತಿ, ಕ್ರಾಂತಿಯ ಅನಂತರದ ನಿರಾಸೆ, ಗೊಂದಲ, ಕೆಲವು ಕಮ್ಯೂನಿಸ್ಟರು ಮತ್ತು ಇತರ ಕಮ್ಯೂನಿಸ್ಟ್ ಪಂಗಡಗಳ ಹೋರಾಟ, ಭಯಂಕರ ಕ್ಷಾಮ, ಸಾಮಾಜಿಕ ಯಂತ್ರದ ವೈಫಲ್ಯ, ಮಾಸ್ಕೊ ಮತ್ತು ಕಾಕಸಸ್ ಪ್ರದೇಶದ ನಗರಗಳಲ್ಲಿನ ಕೌಟುಂಬಿಕ ಜೀವನ, ಸೈಬೀರಿಯದ ರಾಜಕೀಯ ಬಂಧಿಗಳ ದೊಡ್ಡಿಗಳಲ್ಲಿನ ಭೀಭತ್ಸ ಜೀವನ-ಇವೆಲ್ಲ ಈ ಕೃತಿಯಲ್ಲಿ ಚಿತ್ರಿತವಾಗಿವೆ. ಮಾನವನ ಪಾಶವೀ ಕ್ರೌರ್ಯ ಮತ್ತು ಮೂರ್ಖತನಗಳ ಸ್ಪಷ್ಟ ಚಿತ್ರಣವಿಲ್ಲಿದೆ.

	ಹಾಲುವುಡ್ಡಿನ ಎಂಜಿಎಂ ಸಂಸ್ಥೆ ಈ ಕಾದಂಬರಿಯನ್ನು ಚಲನಚಿತ್ರ ಮಾಡಿದೆ (1965). ಕಥೆಯ ಇಲ್ಲಿ ತೀರ ಸುಲಭೀಕರಣಗೊಂಡಿದೆಯಲ್ಲದೆ ಷಿವಾಗೊನ ವ್ಯಕ್ತಿತ್ವ ಸರಿಯಾಗಿ ಮೂಡಿಬಂದಿಲ್ಲವೆಂಬುದು ಚಿತ್ರ ವಿಮರ್ಶಕರ ಅಭಿಪ್ರಾಯ.

	ಪ್ಯಾಸ್ಟರ್‍ನಾಕ್‍ನ ಕಾವ್ಯ ಸೃಷ್ಟಿಗೆ ರಷ್ಯದಾಚೆ ಸಾಕಷ್ಟು ಮನ್ನಣೆ ದೊರೆತಿಲ್ಲ. ಇವನು ಒಳ್ಳೆಯ ಕವಿಯೂ ಹೌದು. ಜರ್ಮನ್ ಕವಿಗಳ ಮತ್ತು ಷೇಕ್ಸ್‍ಪಿಯರನ ಕೃತಿಗಳಮ್ಮು ರಷ್ಯನ್ ಭಾಷೆಗೆ ಅನುವಾದಿಸಿದ್ದಾನೆ. ಇವು ಶೇಷ್ಠ ಅನುವಾದಗಳು ಎಂದು ಮನ್ನಣೆ ಪಡೆದಿವೆ. ಏರಿಯಲ್ ವೇಸ್ ಎನ್ನುವ ಕಥಾ ಸಂಗ್ರಹವನ್ನೂ ಪ್ರಕಟಿಸಿದ್ದಾನೆ.
											   ಪರಿಷ್ಕರಣೆ
(ಎಲ್.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ